ಅಬ್ದುಲ್ ಹಮೀದ್
	1876-1909ರವರೆಗೆ ತುರ್ಕಿ ರಾಜ್ಯದ ಸುಲ್ತಾನನಾಗಿದ್ದ. ಈತ ಸುಲ್ತಾನನಾದದ್ದು ಆಗ ತಾನೆ ಪ್ರಬಲವಾಗುತ್ತ ಬಂದಿದ್ದ ಉದಾರಪಕ್ಷದ ಮುಖಂಡನಾದ ಮಿಧತ್ ಪಾಷಾನ ಬೆಂಬಲದಿಂದ. ಆದ್ದರಿಂದ ಆ ಪಕ್ಷದ ನೀತಿಗನುಸಾರವಾಗಿ ಹೊಸ ರಾಜ್ಯಾಂಗ ವ್ಯವಸ್ಥೆಗೆ ಆಗಿನ ಪರಿಸ್ಥಿತಿ ಅನುಕೂಲವಾಗಿರಲಿಲ್ಲ. ಯೂರೋಪಿನಲ್ಲಿದ್ದ ತುರ್ಕಿಯ ಪ್ರಾಂತಗಳಲ್ಲಿ ಅಶಾಂತಿ ಬೆಳೆಯುತ್ತಿತ್ತು. ರಷ್ಯದೊಡನೆ ನಡೆದ ಯುದ್ಧದ ಪರಿಣಾಮವಾಗಿ ಕೆಲವು ಪ್ರದೇಶಗಳನ್ನು ಕಳೆದುಕೊಳ್ಳಬೇಕಾಯಿತು. ರಾಜ್ಯದಲ್ಲುಳಿದ ಭಾಗಗಳನ್ನಾದರೂ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಆತ ಜರ್ಮನಿಯೊಂದಿಗೆ ಮೈತ್ರಿ ಬೆಳೆಸಿದ; ಜರ್ಮನ್ ಸೈನ್ಯಾಧಿಕಾರಿಗಳು ತುರ್ಕಿ ಸೈನ್ಯವನ್ನು ಬಲಪಡಿಸಿದರು. ಅನಂತರ ಆತ ರಾಜ್ಯಾಂಗವ್ಯವಸ್ಥೆಯನ್ನು ರದ್ದುಗೊಳಿಸಿ ಕೆಲಕಾಲ ನಿರಂಕುಶಾಡಳಿತ ನಡೆಸಿದ. ಆದರೆ ಬಲಗೊಳ್ಳುತ್ತ ಬಂದಿದ್ದ ಉದಾರಪಕ್ಷದ ಯುವಕ ತುರುಕರು 1908ರಲ್ಲಿ ಅವನನ್ನು ಪಟ್ಟದಿಂದ ಉರುಳಿಸಿ ತಮ್ಮನಾದ ಐದನೆಯ ಮಹಮ್ಮದನನ್ನು ಸುಲ್ತಾನ ಪದವಿಗೇರಿಸಿದರು.										
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ